ರೂವಾಂಡ
ಆಫ್ರಿಕ ಖಂಡದ ಮಧ್ಯದಲ್ಲಿ ಪೂರ್ವಕ್ಕಿರುವ ಒಂದು ಗಣರಾಜ್ಯ. ಸಮಭಾಜಕ ವೃತ್ತದ ದಕ್ಷಿಣಕ್ಕಿರುವ ಈ ದೇಶವನ್ನು ಪೂರ್ವದಲ್ಲಿ ಟ್ಯಾನ್‍ಜನೀಯ, ದಕ್ಷಿಣದಲ್ಲಿ ಬುರೂನ್‍ಡೀ ಉತ್ತರ ಈಶಾನ್ಯದಲ್ಲಿ ಉಗಾಂಡ, ಉತ್ತರ ವಾಯವ್ಯದಲ್ಲಿ ಜೈರೆ ರಾಜ್ಯಗಳು ಸುತ್ತುವರಿದಿವೆ. ರೂವಾಂಡ ಪೂರ್ವಪಶ್ಚಿಮವಾಗಿ 233 ಕಿಮೀ, ಉತ್ತರ ದಕ್ಷಿಣವಾಗಿ 177 ಕಿಮೀ ಇದ್ದು ಒಟ್ಟು 26,338 ಚ.ಕಿಮೀ ವಿಸ್ತೀರ್ಣವಾ ಗಿದೆ. ಜನಸಂಖ್ಯೆ 7.2 ಮಿಲಿಯನ್ (2000). ರಾಜಧಾನಿ ಕಿಗಾಲಿ. 

ರೂವಾಂಡ ಸಮುದ್ರಮಟ್ಟದಿಂದ ಸು. 1500 ಮೀ ಎತ್ತರದಲ್ಲಿದ್ದು ಬೆಟ್ಟಗುಡ್ಡಗಳಿಂದ ಕೂಡಿದೆ. ಹವಾ ತಂಪು. ರಾಜಧಾನಿ ಕಿಗಾಲಿಯಲ್ಲಿನ ವಾರ್ಷಿಕ ಸರಾಸರಿ ಉಷ್ಣತೆ 200 ಸೆಂ. ದೇಶದ ಪಶ್ಚಿಮಭಾಗ ಹೆಚ್ಚು ಬೆಟ್ಟಗುಡ್ಡ ಪ್ರದೇಶವಾಗಿದ್ದು ವಾರ್ಷಿಕ 1200 ರಿಂದ 1300 ಮಿಮೀ ಮಳೆ ಆಗುತ್ತದೆ. ಪೂರ್ವಕ್ಕೆ ಹೋದ ಹಾಗೆ ಮಳೆ ಕಡಮೆಯಾಗುತ್ತದೆ. ಜೂನ್, ಜುಲೈ, ಆಗಸ್ಟ್ ಈ ಮೂರು ತಿಂಗಳು ಒಣಹವೆಯಿಂದ ಕೂಡಿರುತ್ತದೆ. ಸಹಸ್ರ ಬೆಟ್ಟಗಳ ನಾಡು ಎಂದು ಕರೆಸಿಕೊಳ್ಳುವ ಈ ನಾಡನ್ನು ಆಫ್ರಿಕದ ಸ್ವಿಟ್ಜರ್ಲೆಂಡ್ ಎಂದೂ ಗುರುತಿಸಲಾಗುತ್ತದೆ. ಈ ನಾಡಿನ ಪಶ್ಚಿಮದಲ್ಲಿ ಮತ್ತು ವಾಯವ್ಯ ದಿಕ್ಕಿನಲ್ಲಿರುವ ಪರ್ವತಗಳು ಅಗ್ನಿಪರ್ವತಗಳಿಂದಾದವು. ಇವುಗಳಲ್ಲಿ ವಿರುಂಗ ಪರ್ವತಶ್ರೇಣಿಯ ಕಾರಿಸಿಂಬಿ ರೂವಾಂಡದ ಅತಿ ಎತ್ತರದ ಪರ್ವತ ಶ್ರೇಣಿ 4510 ಮೀ ಎತ್ತರವಿದೆ. ಪಶ್ಚಿಮದ ಕಡೆ ಬೀಳುವ ಅತಿವೃಷ್ಟಿ ಭೂಮಿಯ ಮಣ್ಣನ್ನು ಕೊಚ್ಚಿಹಾಕಿದೆ. ರೂವಾಂಡದ ಪೂರ್ವಪ್ರದೇಶ ಮೈದಾನಗಳಿಂದ ಕೂಡಿದ್ದು ಸಮುದ್ರಮಟ್ಟದಿಂದ 1500 ಮೀ - 2100 ಮೀ ಎತ್ತರದಲ್ಲಿದೆ. ಅರಣ್ಯಗಳಿಂದ ಆವೃತವಾಗಿದ್ದ ಈ ಪ್ರದೇಶಗಳಲ್ಲಿ ಬೇಸಾಯಕ್ಕಾಗಿ ಜನ ಮರ ಕಡಿದು ಹಾಕಿದ್ದಾರೆ. ಕಣಿವೆಗಳಲ್ಲಿ ಸರಾಸರಿ 230 ಸೆಂ ಉಷ್ಣತೆ ಇರುತ್ತದೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆ 760 ಮಿಮೀ. ಪಶ್ಚಿಮ ಪರ್ವತ ಪ್ರದೇಶಗಳಲ್ಲಿ ವಾರ್ಷಿಕ 170 ಸೆಂ ಇದ್ದು 1470 ಮಿಮೀ ಮಳೆ ಬೀಳುತ್ತದೆ. ದೇಶದ ನಾಲ್ಕೂ ದಿಕ್ಕುಗಳಲ್ಲಿ ಸರೋವರಗಳಿವೆ. ಇವುಗಳಲ್ಲಿ ಇಹೇಮ ರ್ವಾನ್ಯೇ, ಮುಗೆಸರ, ರುಗ್ವೆರೊ, ಬುನ್ಯೊನಿ ಮತ್ತು ರೂವಾಂಡದ ಪಶ್ಚಿಮದಲ್ಲಿ ಗಡಿಯಾಗಿಯೂ ಇರುವ ದೊಡ್ಡ ಸರೋವರ ಕೀವೂ ಮುಖ್ಯವಾದುವು. ಕಗೆರ, ಅಕನ್ಯರು ಮತ್ತು ರುಜಿಜಿ ಇವು ಇಲ್ಲಿನ ಮುಖ್ಯ ನದಿಗಳು. ಇವುಗಳಲ್ಲಿ ಅಕನ್ಯರು ರೂವಾಂಡದ ದಕ್ಷಿಣದ ಎಲ್ಲಿಯಾಗಿಯೂ ಕಗೆರ ಪೂರ್ವದ ಗಡಿಯಾಗಿಯೂ ರುಜಿಜಿ ನೈಋತ್ಯದ ಗಡಿಯಾಗಿಯೂ ಹರಿಯುತ್ತವೆ. ಕಾಫಿ, ಚಹಾ, ಬಾಳೆ, ಬತ್ತ, ಮರಗೆಣಸು, ಹತ್ತಿ, ಆಲೂಗೆಡ್ಡೆ ಮತ್ತು ದ್ವಿದಳ ಧಾನ್ಯಗಳು ಇಲ್ಲಿನ ಪ್ರಮುಖ ಬೆಳೆಗಳು.

ವಾಣಿಜ್ಯ ವ್ಯಾಪಾರದಲ್ಲಿ ಈ ದೇಶ ಮುಂದುವರಿದಿಲ್ಲ. ಉತ್ತಮ ರಸ್ತೆ ಸಂಪರ್ಕಗಳಿಲ್ಲ. ಸಮುದ್ರ ವ್ಯಾಪಾರಕ್ಕೆ ದೂರ ಉಳಿದಿದೆ. ಕಿಗಾಲಿ ಮತ್ತು ಬುಟಾರೆ ಪಟ್ಟಣಗಳಿಗೆ ವಿಮಾನ ಸಂಪರ್ಕವಿದೆ. ತವರ, ಟಂಗ್‍ಸ್ಟನ್ ಗಣಿಗಾರಿಕೆ ಇದೆ. ಸೀಮೆಂಟ್ ತಯಾರಿಕೆಯಿದೆ. ಚಿನ್ನ, ತವರ, ನೈಸರ್ಗಿಕ ಅನಿಲನಿಕ್ಷೇಪಗಳಿವೆ. ಬ್ಯೂಮ್‍ಬ, ರುಬೆಂಗೆರಿ, ಗಿಸ್ನೆ, ಗಿಟರಮ, ಕಿಬುಂಗೊ ನಿಯಾನ್‍ಜ ನಿಯಾನ್‍ಗುಗು-ಇವು ಇಲ್ಲಿನ ಮುಖ್ಯ ಪಟ್ಟಣಗಳು.

ರೂವಾಂಡದಲ್ಲಿನ ಪ್ರಜೆಗಳು ಬಹುಟು ಮತ್ತು ವಟುಷಿ ಸಮುದಾ ಯಕ್ಕೆ ಸೇರಿದವರು. ಪಿಗ್ಮಿಗಳೂ ಇಲ್ಲಿದ್ದು ಹೆಚ್ಚಾಗಿ ಪಟ್ಟಣಗಳಲ್ಲಿ ಕಂಡುಬರುತ್ತಾರೆ. ಚಹಾ ಎಸ್ಟೇಟುಗಳನ್ನು ಮಾಡಿಕೊಂಡಿರುವ ಕೆಲವು ಯುರೋಪಿಯನ್ನರೂ ಇದ್ದಾರೆ. ಬಹುಟು ಜನರು ರೈತರಾಗಿದ್ದರೆ ವಟುಸಿ ಪಶುಪಾಲಕರು. ಫ್ರೆಂಚ್ ಮತ್ತು ಕಿನ್ಯರ್ವಾಂಡ ಅಧಿಕೃತ ಆಡಳಿತ ಭಾಷೆಗಳು. ಸ್ವಾಹಿಲಿ ಭಾಷೆಯೂ ಬಳಕೆಯಲ್ಲಿದೆ. ಓದುಬರೆಹ ತಿಳಿದವರು ಸೇ. 60 ಮಂದಿ. ಬುಡಕಟ್ಟಿನ ಸಂಪ್ರದಾಯಸ್ಥರ ಜೊತೆಗೆ ಕ್ರಿಶ್ಚಿಯನ್ನರೂ ಮುಸಲ್ಮಾನರೂ ಇದ್ದಾರೆ.

ರೂವಾಂಡದಲ್ಲಿ 1959ರ ವರೆಗೂ ವಟುಷಿಗಳ ಅಧಿಕಾರವಿತ್ತು. ಜರ್ಮನಿ 1897ರಲ್ಲಿ ಇಂದಿನ ರೂವಾಂಡ ಮತ್ತು ಬುರೂನ್‍ಡೀ ದೇಶಗಳನ್ನು ಆಕ್ರಮಿಸಿಕೊಂಡಿತು. ಒಂದನೆಯ ಮಹಾಯುದ್ಧದಲ್ಲಿ 1916ರಲ್ಲಿ ಬೆಲ್ಜಿಯಮ್ ಈ ದೇಶಗಳನ್ನು ತನ್ನದನ್ನಾಗಿ ಮಾಡಿಕೊಂಡಿತು. ಮುಂದೆ 1946ರಲ್ಲಿ ಈ ದೇಶಗಳ ಆಡಳಿತ ಸಂಯುಕ್ತ ರಾಷ್ಟ್ರ ನ್ಯಾಸಾಡಳಿತಕ್ಕೆ ಸೇರಿತು. ಜನಾಂಗ ದ್ವೇಷದಿಂದ ಬಹುಟು ಮತ್ತು ವಟುಷಿ ಗುಂಪುಗಳು ಕಾದಾಡಲಾರಂಭಿಸಿ ದೇಶದಲ್ಲಿ ರಕ್ತದ ಹೊಳೆ ಹರಿಸಿದುವು. 1961ರಲ್ಲಿ ರೂವಾಂಡದ ಜನ ತಮ್ಮ ದೇಶವನ್ನು ಒಂದು ಸ್ವತಂತ್ರ ಗಣರಾಜ್ಯವನ್ನಾಗಿ ರೂಪಿಸಲು ಮತ ಚಲಾಯಿಸಿದರು. ಇದರಂತೆ ರೂವಾಂಡ ಮತ್ತು ಬುರೂನ್‍ಡೀ ದೇಶಗಳು 1962 ಜುಲೈ 1ರಂದು ಸ್ವತಂತ್ರವಾದವು. 1973ರಲ್ಲಿ ದೇಶದ ಅಧ್ಯಕ್ಷರನ್ನು ಪದಚ್ಯುತಿಮಾಡಿ ಮಿಲಿಟರಿ ಸರ್ಕಾರ ದೇಶದ ಆಡಳಿತ ವಹಿಸಿಕೊಂಡಿತು.

1990ರಲ್ಲಿ ವಿವಿಧ ರಾಜಕೀಯ ಪಕ್ಷಗಳು ಸೇರಿ ಪ್ರಜಾಪ್ರಭುತ್ವ ಸರ್ಕಾರ ರೂಪಿಸಿದುವು. 1993ರಲ್ಲಿ ಎರಡೂ ಬಣಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೂ ಜನಾಂಗದ್ವೇಷ ಮುಂದುವರಿಯಿತು. ಸಾವಿರಾರು ಮಂದಿಯ ಕಗ್ಗೊಲೆಯಾಯಿತು. ಲಕ್ಷಗಟ್ಟಲೆ ಜನರು ದೇಶಬಿಟ್ಟು ಬುರೂನ್‍ಡೀಗೆ ವಲಸೆ ಹೋದರು. 1994ರಲ್ಲಿ ರೂವಾಂಡ ಮತ್ತು ಬುರೂನ್‍ಡೀ ಎರಡೂ ದೇಶಗಳ ಅಧ್ಯಕ್ಷರು ವಿಮಾನ ಅಪಘಾತದಲ್ಲಿ ಸತ್ತರು. ಉಗ್ರರು ಇದಕ್ಕೆ ಕಾರಣವೆಂದು ಜನಾಂಗ ದ್ವೇಷ ಮತ್ತಷ್ಟು ಉಲ್ಬಣಗೊಂಡಿತು. ಸು. 50,000 ಮಂದಿಯ ಹತ್ಯೆಯಾಯಿತು. ಪಶ್ಚಿಮ ರೂವಾಂಡದ ಬಹುಟು ಜನ ಪಕ್ಕದ ಜೈರೆಗೆ ವಲಸೆ ಹೋದರು. 1996ರ ನವೆಂಬರ್‍ನಲ್ಲಿ ಟ್ಯಾನ್‍ಜನೀಯ ಮತ್ತು ಜೈರೆಯಿಂದ ಸುಮಾರು ಒಂದು ಮಿಲಿಯನ್ ನಿರಾಶ್ರಿತರು ರೂವಾಂಡಕ್ಕೆ ವಾಪಸ್ಸಾದರು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ